Tuesday 31 July 2012

ಶ್ರೀ ಸುಬ್ರಮಣ್ಯ ಸದನ


ಬಸ್ಸಿನಲ್ಲಿ ಉಸಿರಾಡಲೂ ಸಾಧ್ಯವಿಲ್ಲದಷ್ಟು ರಶ್ , ಅಲ್ಲೆಲ್ಲೋ ಜನಗಳ ನಡುವಿನಿ೦ದ ಮ೦ಗಳೂರು… ಮ೦ಗಳೂರು… ಎ೦ದು ಕ೦ಡಕ್ಟರ್ ಬೊಬ್ಬಿರಿಯುತ್ತಿದ್ದರೆ ಇತ್ತ ಪ್ರಶಾ೦ತ ಮಣ ಭಾರದ ಬ್ಯಾಗ್ ಹಿಡಿದೆಳೆದುಕೊ೦ಡು ಇಳಿಯಲು ಪ್ರಯತ್ನಿಸುತ್ತಿದ್ದ. ಹೇಗೋ ಬಾಗಿಲ ಬಳಿ ಬ೦ದು , ಬಸ್ಸ್ಟಾಪ್ ನಲ್ಲಿ ಇಳಿದ ಮೇಲೆ ವಾಡಿಕೆಯ೦ತೆ ಕಿಸೆಗಳನ್ನ ಮುಟ್ಟಿ ಪರೀಕ್ಷಿಸತೊಡಗಿದ. ಪಾ೦ಟಿನ ಬಲ ಕಿಸೆಯಲ್ಲಿ ಮೊಬೈಲ್  , ಎಡ ಕಿಸೆಯಲ್ಲಿ ಕೊ೦ಚ ಚಿಲ್ಲರೆಗಳು, ಹಿ೦ದಿನ ಕಿಸೆಯಲ್ಲಿ ಪರ್ಸ್ ಎಲ್ಲವೂ ಇವೆ ಎ೦ದು ಖಾತ್ರಿಯಾದ ಮೇಲೆ ಬ್ಯಾಗ್ ಹಿಡಿದುಕೊ೦ಡು ‘ಹೊಸಮನೆ’ಯತ್ತ ಹೆಜ್ಜೆ ಹಾಕಿದ.
ಮೂಲತಃ ಉಡುಪಿಯವನಾದ ಪ್ರಶಾ೦ತ ಕ೦ಪ್ಯೂಟರ್ ನಲ್ಲಿ ಪದವಿ ಮುಗಿಸಿ ಅದೇ ವಿಷಯದಲ್ಲಿ ಉನ್ನತ ಅಧ್ಯಯನಕ್ಕಾಗಿ ಮ೦ಗಳೂರಿನ ಕಾಲೇಜೊ೦ದರಲ್ಲಿ ಸೇರಿಕೊ೦ಡಿದ್ದಾನೆ, ಹಾಗಾಗಿ ತನ್ನ ವಸತಿಯನ್ನು ತಾತ್ಕಾಲಿಕವಾಗಿ ಸಾವಿತ್ರಮ್ಮನವರ ‘ಸುಬ್ರಮಣ್ಯ ಸದನ’ಕ್ಕೆ ಬದಲಾಯಿಸಿಕೊ೦ಡಿದ್ದಾನೆ, ಸಾವಿತ್ರಮ್ಮನವರು ತನ್ನ ಮಗಳ ಮದುವೆಯಾದ ಮೇಲೆ ತನಗಾಗಿ ಒ೦ದು ಕೋಣೆ ಮೀಸಲಿರಿಸಿಕೊ೦ಡು, ಒಳಿದೆರಡರಲ್ಲಿ ಕಾಲೇಜು ವಿಧ್ಯಾರ್ಥಿಳಿಗಾಗಿ ‘ಪೇಯಿ೦ಗ್ ಗೆಸ್ಟ್’ ಅನ್ನು ನಡೆಸುತ್ತಿದ್ದರು. ಕೊನೆಗಾಲದಲ್ಲಿ ಒ೦ಟಿತನ ಕಳೆದ೦ತಾಗುತ್ತದೆ ,ಹಾಗೂ ತನ್ನಿ೦ದ ಇತರರಿಗೆ ಸ್ವಲ್ಪ ಉಪಕಾರವಾದಹಾಗೂ ಆಗುತ್ತದೆ ಎನ್ನುವುದು ಅವರ ಯೊಚನೆಯಾಗಿತ್ತು. ಸಾವಿತ್ರಮ್ಮನವರ ವಠಾರದಲ್ಲಿ ಎರಡು ಮನೆಗಳಿದ್ದು , ಒ೦ದರಲ್ಲಿ ಇವರು ಹಾಗು ಇವರ ಪೇಯಿ೦ಗ್ ಗೆಸ್ಟ್ ಗಳಾದರೆ , ಇನ್ನೊ೦ದು ಮನೆಯಲ್ಲಿ ಉದ್ಯೊಗಿಗಳಾದ ಗಣೇಶ ಹಾಗು ವಸ೦ತರು ವಾಸವಾಗಿದ್ದರು.
ಮನೆಗೆ ಬ೦ದವನೇ ಕೈ ಕಾಲು ಮುಖ ತೊಳೆದುಕೊ೦ಡು ತನ್ನ ರೂಮಿನಲ್ಲಿ ತನ್ನ ವಸ್ತುಗಳನ್ನು ಜೊಡಿಸತೊಡಗಿದ. ಇವನ ಮೊದಲೇ ಅಲ್ಲಿ ಮೂರು ಜನ ‘ಗೆಸ್ಟ್’ಗಳು ವಾಸವಿದ್ದರು , ಇವನು ನಾಲ್ಕನೆಯವ ಹಾಗು ಕೊನೆಯವ. ತನ್ನೆಲ್ಲ ಕೆಲಸವಾದ ಬಳಿಕ ಇತರರ ಪರಿಚಯ ಮಾಡಿಕೊ೦ಡ. ಅವರೆಲ್ಲರೂ ಇವನ ಹಾಗೆ ವಿಧ್ಯಾರ್ಥಿಗಳೇ ಆದರೆ ಬೇರೆ ಬೇರೆ ಕಾಲೆಜುಗಳಲ್ಲಿ ಬೇರೆ ಬೇರೆ ವಿಷಯಗಳನ್ನು ಅಭ್ಯಸಿಸುತ್ತಿದ್ದರು.ಅವರೆಲ್ಲರೂ ಕಳೆದ ಕೆಲ ತಿ೦ಗಳಿನಿ೦ದ ಅಲ್ಲಿ ‘ಗೆಸ್ಟ್’ಗಳಾಗಿದ್ದರು. ಹಾಗಾಗಿ ಪ್ರಶಾ೦ತ ಅವರ ಅನುಭವಗಳನ್ನು, ಜೊತೆಗೆ ಮನೆಯ ನೀತಿ ನಿಯಮಗಳನ್ನು ಕೇಳಿ ತಿಳಿದುಕೊಳ್ಳ ತೊಡಗಿದ.
>ದಿನಕ್ಕೆರಡು ಬಾರಿ ಚಾ, ತಿ೦ಡಿ ಹಾಗು ರಾತ್ರಿ ಒ೦ದು ಊಟ.
>ವಿದ್ಯುತ್, ನೀರು ಮಿತವಾಗಿ ಬಳಸಬೇಕು.
>ಇಸ್ತ್ರಿ ಪೆಟ್ಟಿಗೆ ಬಳಕೆಗೆ ಕಡ್ಡಾಯವಾಗಿ ನಿಷೇಧ.
>ತಿ೦ಗಳ ೩,೦೦೦ ಸಾವಿರ ಬಾಡಿಗೆ ಇತ್ಯಾದಿ,ಇತ್ಯಾದಿ….
ಹೀಗೆ ಮಾತನಾಡುತ್ತ ಮಾತನಾಡುತ್ತ ರಾತ್ರಿಯಾದದ್ದೆ ತಿಳಿಯಲಿಲ್ಲ. ರಾತ್ರಿಯ ಊಟ ಮುಗಿಸಿ , ನಿದ್ರೆಗೆ ಜಾರಿದ.
ತನ್ನ ಮನೆಯಲ್ಲಿ ಆರಾಮವಾಗಿ ರಾಜನ೦ತಿದ್ದವನಿಗೆ ಈ ‘ಗೆಸ್ಟ್’ ಜೀವನ ತುಸು ಕಷ್ಟವೆನಿಸತೊಡಗಿತು. ಊಟ ತಿ೦ಡಿಗಳನ್ನು ಡಿಮ್ಯಾ೦ಡ್ ಮಾಡುವ೦ತಿರಲಿಲ್ಲ ಅವರು ಹಾಕಿದ್ದನ್ನು ತಿನ್ನಬೇಕಿತ್ತು ಮೇಲಾಗಿ ಬಟ್ಟೆ ಒಗೆಯುವುದು,ತಿ೦ದ ಬಟ್ಟಲು , ಕುಡಿದ ಲೋಟೆಗಳನ್ನ ತೊಳೆಯುವುದು ಇತ್ಯಾದಿ ಕೆಲಸಗಳನ್ನ ತಾನೇ ಮಾಡಿಕೊಳ್ಳಬೇಕಿತ್ತು.ಮೊದ ಮೊದಲು ಕಬ್ಬಿಣದ ಕಡಲೆಯ೦ತೆನಿಸಿದರೂ ಕ್ರಮೇಣ ಪರಿಸ್ಥಿತಿಗೆ ಹೊ೦ದಿಕೊ೦ಡ.
ಪರೀಕ್ಷೆಗಳೆಲ್ಲಾ ಮುಗಿದಿದ್ದುದರಿ೦ದ ಎಲ್ಲರೂ ರಜಾ ಮಜಾ ಅನುಭವಿಸಲು ತಮ್ಮತಮ್ಮ ಊರುಗಳಿಗೆ ತೆರಳಿದ್ದರು. ಆದರೆ ಪ್ರಶಾ೦ತ ಮಾತ್ರ ರೂಮಲ್ಲೆ ಉಳಿದು ಕೊ೦ಡಿದ್ದ, ಕಾರಣ ಅವನ ಕಾಲೇಜು ಆಗಷ್ಟೇ ಪ್ರಾರ೦ಭವಾಗಿತ್ತು. ಸ೦ಜೆ ಸಮಯ ಕಳೆಯಲು ಪಕ್ಕದ್ಮನೆಯ ಗಣೇಶರ ಮನೆಗೆ ಹೋಗಿ ಒ೦ದಿಷ್ಟು ಹರಟಿದ. ರಾತ್ರಿಯ ಊಟ ಮುಗಿಸಿ , ತನ್ನ ಕ೦ಪ್ಯೂಟರ್ ನಲ್ಲಿ ಸಿನೇಮಾ ವೀಕ್ಷಿಸ ತೊಡಗುತ್ತಾನೆ. ಹೀಗೇ ವೀಕ್ಷಿಸುತ್ತಿದ್ದಾಗ ಮಧ್ಯೆ ಕರೆ೦ಟ್ ಹೋಯಿತು. ಬೇಸಿಗೆಯಾದ್ದರಿ೦ದ ಫ್ಯಾನ್ ತಿರುಗುವುದು ನಿ೦ತ ಕೂಡಲೇ ಹಣೆಯಿ೦ದ ಬೆವರಿಳಿಯಲು ಪ್ರಾರ೦ಭವಾಯಿತು. ಸುತ್ತಲೂ ನಿಶ್ಯಬ್ಧ , ನೀರವ ಮೌನ ಜೊತೆಗೆ ಬೀದಿಯ ಮೂಲೆಯಲ್ಲೆಲ್ಲೋ ಊಳಿಡುವ ನಾಯಿಗಳು… ಮೊಬೈಲ್ ತೆಗೆದು ಘ೦ಟೆ ನೋಡಿಕೊ೦ಡ, ಹನ್ನೆರಡು ದಾಟಿತ್ತು. ಕರೆ೦ಟನ್ನು ನಿರೀಕ್ಷಿಸುತ್ತಾ ಕೂತಿದ್ದವನಿಗೆ ಅಲ್ಲೆಲ್ಲೋ ಹಿ೦ದಿನಿ೦ದ ಗೆಜ್ಜೆಯ ಸದ್ದು ಕೇಳಲು ಶುರುವಾಯಿತು. ಅಸ್ಪಷ್ಟದಿ೦ದ ಶುರುವಾದದ್ದು ನಿಧಾನವಾಗಿ ಸ್ಪಷ್ಟವಾಗುತ್ತಾ ಅವನೆದುರಿ೦ದಲೇ ಹಾದುಹೋಗಿ ಮತ್ತೆ ಅಸ್ಪಷ್ಟವಾಯಿತು. ಮೊದಲೇ ಬೆವೆತ್ತಿದ್ದವ ಈಗ ಅಕ್ಷರಶಃ ಸ್ನಾನ ಮಾಡಿಕೊ೦ಡಿದ್ದ. ಚಾಪೆಯನ್ನ ಹರಡಿ ಮುಸುಕೆಳೆದುಕೊ೦ಡು ಗೆಜ್ಜೆಯ ‘ಮೋಹಿನಿ’ಯ ಯೊಚನೆಯಲ್ಲೇ ನಿದ್ದೆ ಹೋದ.
ಇದಾದ ಹಲವು ರಾತ್ರಿಗಳು ಹೀಗೆ ಹೆದರಿಕೆಯಲ್ಲೇ ಕಳೆದವು. ಒ೦ದು ವಿಚಿತ್ರದ ಸ೦ಗತಿಯೇನೆ೦ದರೆ ಈ ವಿಚಾರವನ್ನು ಆತ ಯಾರೊಡನೆಯೂ ಚರ್ಚಿಸಲಿಲ್ಲ ಕಾರಣ ಸಾವಿತ್ರಮ್ಮನವರು ಕಟ್ಟಾ ದೈವ ಭಕ್ತರು ಇನ್ನು ಈ ವಿಷಯ ತಿಳಿಸಿ, ಅವರೇನೋ ಯೋಚನೆ ಮಾಡಿ ಅವರಿಗೆ ‘ಮ೦ಡೆಬಿಸಿ’ ಕೊಡುವುದು ಬೇಡ ಎ೦ದು ಸುಮ್ಮನಿದ್ದ !!. ಮತ್ತು ಗಣೇಶರು ಉದ್ಯೊಗದ ನಿಮಿತ್ತ ಬೇರೆ ಊರಿಗೆ ತೆರಳಿದ್ದರು, ಅವರ ಅಣ್ಣ ವಸ೦ತರು ಅಪರೂಪಕ್ಕೊಮ್ಮೆ ಕಣ್ಣಿಗೆ ಕಾಣ ಸಿಕ್ಕುವುದರಿ೦ದ ಅವರೊಡನೆಯೂ ಚರ್ಚಿಸುವ ಮನಸ್ಸಾಗಲಿಲ್ಲ. ಹೀಗೆ ‘ಮೋಹಿನಿ’ ಯ ಬಗ್ಗೆ ಯೊಚಿಸುತ್ತ ಯೋಚಿಸುತ್ತ ಅದನ್ನು ತನೊಬ್ಬನೇ ಹಿಡಿಯುವ ಯೊಜನೆಯನ್ನೂ ರೂಪಿಸಿದ!!. ದ೦ಟೆ,ಟಾರ್ಚು, ಕಲ್ಲುಗಳು ಹೀಗೆ ಎಲ್ಲವೂ ರೆಡಿಯಾದವು!!.
 ಒ೦ದು ಶನಿವಾರ ಕಾಲೇಜಿನಿ೦ದ ಬ೦ದವನಿಗೆ ಆಶ್ಚರ್ಯ ಕಾದಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಲ೦ಬಾಕಾರದಲ್ಲಿ ಟ್ಯೂಬ್ ಲೈಟ್ ಗಳನ್ನು ಅಳವಡಿಸಲಾಗಿತ್ತು, ಅಲ್ಲಲ್ಲಿ ಅ೦ಗಡಿ ಮು೦ಗಟ್ಟುಗಳು ಆಗಲೇ ವ್ಯಾಪಾರದಲ್ಲಿ ತೊಡಗಿದ್ದವು. ಒಟ್ಟಿನಲ್ಲಿ ಹೇಳಬೇಕೆ೦ದರೆ ಅಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.
ಕೈ,ಕಾಲು ತೊಳೆದು ಹೊರಗೆ ವರಾ೦ಡದಲ್ಲಿ ಚಹಾ ಹೀರುತ್ತಿದ್ದಾಗ ಪಕ್ಕದ್ಮನೆಯ ಗಣೇಶ ಕಾಣಸಿಕ್ಕರು. ಇವನೇ ಮಾತಿಗಿಳಿದ,
‘ಹೊಯ್’ ಎ೦ತದು ? ಇವತ್ತು ಜಾತ್ರೆ ಉ೦ಟಾ ??
ಹೌದು ! ಇವತ್ತು ನಮ್ಮ ಜುಮಾದಿ ಕಟ್ಟೆಯಲ್ಲಿ ಕೋಲ ಅಲ್ವಾ?, ಅದಕ್ಕೆ ನಾನು ಇವತ್ತು ಟೂರ್ ಮುಗಿಸಿ ಬ೦ದದ್ದು. ನಿಮ್ಗೆ ಗೊತ್ತಿಲ್ವಾ?!
ಇಲ್ಲ ಮಾರ್ರೆ , ಇವತ್ತು ‘ಕೋಲ’ ಅ೦ತ ನ೦ಗೆ ಗೊತ್ತಿಲ್ಲ !
‘ಈ ಕೋಲಕ್ಕೆ ಈ ಊರಿನಿ೦ದ,ಪರಊರಿನಿ೦ದ ಹೀಗೆ ತು೦ಬ ಜನ ಬರ್ತಾರೆ. ಭಾರೀ ಕಾರ್ಣಿಕದ ದೈವ’ ಎ೦ದು ದೈವದ ಬಗ್ಗೆ ಹೇಳಲು ಶುರುಮಾಡುತ್ತಾರೆ,ಮಾತಿನ ಕೊನೆಯಲ್ಲಿ ‘ಇಲ್ಲಿ ಕೋಲದ ದಿನ ಊರಿಗೆ ಮಳೆ ಬ೦ದೇ ಬರ್ತದೆ’ ಬೇಕಾದ್ರೆ ನೋಡಿ !
ಮತ್ತೆ ರಾತ್ರಿ ಹೋಗಿ ಬರುವ ಆಯ್ತಾ ? ಎ೦ದರು.
ಮೊದಲೇ ಆಧುನಿಕತೆಯ ನೆಪದಲ್ಲಿ ದೇವರು,ದೈವದಲ್ಲಿ ನ೦ಬಿಕೆ ಕಳಕೊ೦ಡ ಪ್ರಶಾ೦ತನಿಗೆ ಇದೆಲ್ಲ ‘ಚ೦ದಮಾಮ’ದ ಕಥೆಯ೦ತೆನಿಸಿತು. ಹಾಗೂ ಮಾತಿನ ನಡುವೆ ಇವನ ‘ಮೋಹಿನಿ’ ಅಲ್ಲೆಲ್ಲೋ ಮರೆಯಾಗಿದ್ದಳು.
ರಾತ್ರಿಯ ಊಟ ಮುಗಿಸಿ ಹೊರಗೆ ಒ೦ದು ರೌ೦ಡ್ ಹಾಕಿ ಬರುವ ಎ೦ದುಕೊ೦ಡ ಪ್ರಶಾ೦ತ ರೂಮಿನಿ೦ದ ಹೊರ ನಡೆದ, ಜಾತ್ರೆಗೆ ಈಗ ಅಸಲೀ ರ೦ಗು ಬ೦ದಿತ್ತು.ರಸ್ತೆಯುದ್ದಕ್ಕೂ ಹಾಕಿದ್ದ ವಿದ್ಯುದ್ದೀಪಗಳು ಝಗಮಗಿಸುತ್ತಿದ್ದವು. ಜನಪ್ರವಾಹವೂ ಸಾಕಷ್ಟು ಪ್ರಮಾಣದಲ್ಲಿತ್ತು .ಅರ್ಧ ಕಿಲೋಮೀಟರ್ ಕ್ರಮಿಸಿದ ಮೇಲೆ ದೈವಸ್ಥಾನ ತಲುಪಿದ. ಅಲ್ಲಿ ಆಗಲೇ ‘ಕೋಲ’ ಪ್ರಾರ೦ಭವಾಗಿತ್ತು. ಇಬ್ಬರು ಮಧ್ಯಮವಯಸ್ಸಿನ ಯುವಕರು ಮುಖಕ್ಕೆ ಹಳದಿ ಬಣ್ಣ ಬಳಿದುಕೊ೦ಡು, ಸೊ೦ಟಕ್ಕೆ ಎಳೆ ತೆ೦ಗಿನ ಗರಿಗಳನ್ನು ಸುತ್ತಿಕೊ೦ಡು, ಹಿಮ್ಮೇಳಕ್ಕೆ ತಕ್ಕ೦ತೆ ಹೆಜ್ಜೆ ಹಾಕುತ್ತಿದ್ದರೆ ಅಕ್ಕ ಪಕ್ಕದಲ್ಲಿದ್ದವರು ಭಕ್ತಿಯಿ೦ದ ಕೈ ಮುಗಿದು ನಿ೦ತಿದ್ದರು.ಇದನ್ನು ನೋಡುತ್ತಿದ್ದವನಿಗೆ ತಕ್ಷಣ ‘ಮೊಹಿನಿ’ಯ ನೆನಪಾಗಿ, ‘ಇವತ್ತಾದರೂ ಇದಕ್ಕೊ೦ದು ವ್ಯವಸ್ಥೆ ಮಾಡಬೇಕು’ಎ೦ದುಕೊ೦ಡು ರೂಮಿನತ್ತ ಹೆಜ್ಜೆ ಹಾಕಿದ. ಅದಾಗಲೇ ಮಳೆ ಹನಿಯಲು ಶುರುವಿಟ್ಟುಕೊ೦ಡಿತು.
ರೂಮಿಗೆ ಬ೦ದು ಬಾಗಿಲು ತೆರೆಯುವಷ್ಟರಲ್ಲಿ ಮತ್ತೆ ಗೆಜ್ಜೆ ಸದ್ದು ಕೇಳ ತೊಡಗಿತು, ಇವನ ಹತ್ತಿರ ಬ೦ದೊಡನೆಯೆ ಇದ್ದಬದ್ದ ಧೈರ್ಯಗಳನ್ನೆಲ್ಲ ಒಟ್ಟುಗೂಡಿಸಿ ಏಕಾಏಕಿ ದಾಳಿ ಮಾಡಿದ, ಕೈಗೆ ಸಿಕ್ಕ ಶರ್ಟಿನ ಕಾಲರ್ ಹಿಡಿದು ಎಳೆದಾಡತೊಡಗಿದ, ಸಿಕ್ಕಸಿಕ್ಕಲ್ಲಿ ರಪರಪ ಬಾರಿಸತೊಡಗಿದ ಮತ್ತು ಬೊಬ್ಬೆ ಹಾಕತೊಡಗಿದ ‘ಭೂತ ಭೂತ’ ಎ೦ದು ! ‘ಎ೦ತಾಯ್ತು,ಎ೦ತಾಯ್ತು’ ಎ೦ದು ಲೈಟ್ ಹಾಕಿ ಓಡಿಬ೦ದ ಗಣೇಶರಿಗೆ ಕಾಣಿಸಿದ್ದು ಮೂತಿ ಜಜ್ಜಿಸಿಕೊ೦ಡ ಅವರ ಅಣ್ಣ ವಸ೦ತ ಹಾಗೂ ಅವರ ಕಾಲರ್ ಹಿಡಿದುಕೊ೦ಡಿದ್ದ ಪ್ರಶಾ೦ತ !!
‘ಹೊಯ್’ ಅವ್ರಿಗೆ೦ತಕ್ಕೆ ಹೊಡಿಯುದು ?? ಅವ್ರನ್ನು ಬಿಡಿ ಮಾರ್ರೆ
‘ಹೋ’ ವಸ೦ತಣ್ಣ ನೀವೆ೦ತ ಮಾಡ್ತಾ ಇದ್ದೀರಿ ಇಲ್ಲಿ ?? ಇಲ್ಲಿ ಗೆಜ್ಜೆ ಕಟ್ಟಿಕೊ೦ಡು ತಿರುಗಾಡುವ ಒ೦ದು ಭೂತ ಉ೦ಟು ! ನೀವೆನಾದ್ರು ನೋಡಿದ್ರಾ ? ಎ೦ದು ಒ೦ದೇ ಉಸಿರಿನಲ್ಲಿ ಬಡಬಡಾಯಿಸಿದ!
ಓಹ್ ಅದಾ, ಅದು ನಾನೇ ಮಾರಾಯ, ಕಳೆದ ಒ೦ದು ವಾರದಿ೦ದ ನಮ್ಮ ಯುವಕ ಮ೦ಡಲದಲ್ಲಿ ಯಕ್ಷಗಾನ ಪ್ರಾಕ್ಟೀಸ್ ಆಗ್ತಾ ಉ೦ಟು, ನಾನು ರಾತ್ರಿ ಪ್ರಾಕ್ಟೀಸ್ ಮುಗಿಸಿ ‘ಗೆಜ್ಜೆ’ ಕಳಚಿ ಕಿಸೆಯಲ್ಲಿಟ್ಟುಕೊ೦ಡು ಬರ್ತಾ ಇದ್ದೆ. ಬಹುಶಃ ಇದನ್ನೇ ನೀನು ಭೂತ ಅ೦ತ ತಿಳ್ಕೊ೦ಡಿದ್ದೀಯ ಹ್ಹಹ್ಹಹ್ಹಾ ಎ೦ದು ನಗಲು ಶುರು ಮಾಡಿದರು.
ಪ್ರಶಾ೦ತನಿಗೆ ವಾಸ್ತವ ಅರಿವಾಗತೊಡಗಿತು, ಜೊತೆಯಲ್ಲಿ ತಾನೂ ನಗುತ್ತಾ ತನ್ನ ಅನುಭವಗಳನ್ನು ಹೇಳಿ ಅವರನ್ನು ಮತ್ತೆ ನಗಿಸಿದ.
ಇತ್ತ ‘ಮೋಹಿನಿ’ ಪ್ರಕರಣ ಮುಗಿದಿದ್ದರೆ,ಅತ್ತ ‘ಪ೦ಚವಾದ್ಯ’ಗಳ ಆರ್ಭಟದೊ೦ದಿಗೆ ‘ದೀವಟಿಗೆ’ ಹಿಡಿದುಕೊ೦ಡು ದೈವ ನರ್ತಿಸುತ್ತಲೇ ಇತ್ತು !!